Asianet Suvarna News Asianet Suvarna News

IPL 2024 ಮುಂಬೈ ಇಂಡಿಯನ್ಸ್ ಪ್ಲೇ-ಆಫ್‌ ಕನಸು ಭಗ್ನ?

ಸುಲಭ ಗುರಿ ಬೆನ್ನತ್ತಿದ ಲಖನೌ, 6 ವಿಕೆಟ್‌ ಕಳೆದುಕೊಂಡರೂ ನಿರಾತಂಕವಾಗಿ ಇನ್ನೂ 4 ಎಸೆತ ಬಾಕಿ ಇರುವಂತೆ ಜಯದ ದಡ ಸೇರಿತು. ನಾಯಕ ಕೆ.ಎಲ್‌.ರಾಹುಲ್‌ 28 ರನ್‌ ಗಳಿಸಿದರೆ, ಸ್ಟೋಯ್ನಿಸ್‌ರ ಆಕರ್ಷಕ ಆಟ ತಂಡಕ್ಕೆ ನೆರವಾಯಿತು.

IPL 2024 Mumbai Indians playoffs hope almost end after lose to LSG kvn
Author
First Published May 1, 2024, 8:00 AM IST

ಲಖನೌ(ಮೇ.01): ಮಾರ್ಕಸ್‌ ಸ್ಟೋಯ್ನಿಸ್‌ ಸತತ 2ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ಗೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ. ಮುಂಬೈ ಇಂಡಿಯನ್ಸ್‌ ವಿರುದ್ಧ 4 ವಿಕೆಟ್‌ ಗೆಲುವು ಸಾಧಿಸಿದ ಲಖನೌ, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದು ಪ್ಲೇ-ಆಫ್‌ನತ್ತ ದಿಟ್ಟ ಹೆಜ್ಜೆಯನ್ನಿರಿಸಿದರೆ, ಸತತ 3 ಸೇರಿ ಒಟ್ಟಾರೆ 7ನೇ ಸೋಲು ಕಂಡಿರುವ ಮುಂಬೈನ ಪ್ಲೇ-ಆಫ್‌ ಕನಸು ಬಹುತೇಕ ಭಗ್ನಗೊಂಡಿದೆ. ಮಂಗಳವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈ, 7 ವಿಕೆಟ್‌ಗೆ 144 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.

ಸುಲಭ ಗುರಿ ಬೆನ್ನತ್ತಿದ ಲಖನೌ, 6 ವಿಕೆಟ್‌ ಕಳೆದುಕೊಂಡರೂ ನಿರಾತಂಕವಾಗಿ ಇನ್ನೂ 4 ಎಸೆತ ಬಾಕಿ ಇರುವಂತೆ ಜಯದ ದಡ ಸೇರಿತು. ನಾಯಕ ಕೆ.ಎಲ್‌.ರಾಹುಲ್‌ 28 ರನ್‌ ಗಳಿಸಿದರೆ, ಸ್ಟೋಯ್ನಿಸ್‌ರ ಆಕರ್ಷಕ ಆಟ ತಂಡಕ್ಕೆ ನೆರವಾಯಿತು. 45 ಎಸೆತದಲ್ಲಿ 7 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 62 ರನ್‌ ಗಳಿಸಿದ ಆಸ್ಟ್ರೇಲಿಯಾದ ಆಲ್ರೌಂಡರ್‌ ತಂಡವನ್ನು ಜಯದ ಸನಿಹಕ್ಕೆ ತಂದು ಔಟಾದರು. ದೀಪಕ್‌ ಹೂಡಾ, ನಿಕೋಲಸ್‌ ಪೂರನ್‌ರ ಜವಾಬ್ದಾರಿಯುತ ಆಟ, ಪಂದ್ಯ ಲಖನೌ ಕೈಜಾರದಂತೆ ನೋಡಿಕೊಂಡಿತು.

ಮುಂಬೈ ‘ಪವರ್‌-ಕಟ್‌’!: ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ಮುಂಬೈ, ಪವರ್‌-ಪ್ಲೇನಲ್ಲೇ ಮಂಕಾಯಿತು. 6 ಓವರಲ್ಲಿ ಕೇವಲ 28 ರನ್‌ಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತು. ರೋಹಿತ್‌, ಸೂರ್ಯ, ತಿಲಕ್‌ ಹಾಗೂ ಹಾರ್ದಿಕ್‌ ಔಟ್‌ ಆದರು. ಇಶಾನ್‌ ಕಿಶನ್‌ 32 ರನ್‌ ಗಳಿಸಲು 36 ಎಸೆತ ವ್ಯರ್ಥ ಮಾಡಿದರು.

ಕೊನೆಯಲ್ಲಿ ನೇಹಲ್‌ ವಧೇರಾ(46) ಹಾಗೂ ಟಿಮ್‌ ಡೇವಿಡ್‌ (18 ಎಸೆತದಲ್ಲಿ 35*) ತಂಡದ ಮೊತ್ತ 140 ರನ್‌ ದಾಟಲು ಕಾರಣರಾದರು. ಮೊಹ್ಸಿನ್‌ ಖಾನ್‌ 2, ಸ್ಟೋಯ್ನಿಸ್‌, ನವೀನ್‌, ಮಯಾಂಕ್‌, ಬಿಷ್ಣೋಯ್‌ ತಲಾ 1 ವಿಕೆಟ್‌ ಕಿತ್ತರು.

ಸ್ಕೋರ್‌: 
ಮುಂಬೈ 20 ಓವರಲ್ಲಿ 144/7 (ನೇಹಲ್‌ 46, ಡೇವಿಡ್‌ 35*, ಮೊಹ್ಸಿನ್‌ 2-36)
ಲಖನೌ 19.2 ಓವರಲ್ಲಿ 145/6 (ಸ್ಟೋಯ್ನಿಸ್‌ 62, ರಾಹುಲ್‌ 28, ಹಾರ್ದಿಕ್‌ 2-26) 
ಪಂದ್ಯಶ್ರೇಷ್ಠ: ಮಾರ್ಕಸ್‌ ಸ್ಟೋಯ್ನಿಸ್‌

ಹುಟ್ಟುಹಬ್ಬದ ದಿನ ರೋಹಿತ್‌ ಶರ್ಮಾ ಒಂದಂಕಿ ಸ್ಕೋರ್‌!

ಏ.30, ರೋಹಿತ್‌ರ ಹುಟ್ಟುಹಬ್ಬ. ತಮ್ಮ ಹುಟ್ಟುಹಬ್ಬಗಳಂದು ರೋಹಿತ್‌ ಮುಂಬೈ ಪರ 4 ಐಪಿಎಲ್‌ ಪಂದ್ಯಗಳನ್ನು ಆಡಿದ್ದಾರೆ. 2014ರ ಏ.30ರಂದು 5 ಎಸೆತದಲ್ಲಿ 1 ರನ್‌ಗೆ ಔಟಾಗಿದ್ದ ರೋಹಿತ್‌, 2022ರ ಏ.30ರಂದು 5 ಎಸೆತದಲ್ಲಿ 2 ರನ್‌, 2023ರ ಏ.30ರಂದು 5 ಎಸೆತದಲ್ಲಿ 3 ರನ್‌ಗೆ ವಿಕೆಟ್‌ ಕಳೆದುಕೊಂಡಿದ್ದರು. 2024ರ ಏ.30ರಂದು 5 ಎಸೆತದಲ್ಲಿ 4 ರನ್‌ ಗಳಿಸಿ ಔಟಾದರು.

Follow Us:
Download App:
  • android
  • ios