Asianet Suvarna News Asianet Suvarna News

ಐಸಿಸಿ ಟಿ20 ವಿಶ್ವಕಪ್ ಟೂರ್ನಿ: ಭಾರತ ತಂಡ ಆಯ್ಕೆಗೆ ಅಗರ್‌ಕರ್-ರೋಹಿತ್ ಬಿಸಿಬಿಸಿ ಚರ್ಚೆ..! ರೇಸ್‌ನಲ್ಲಿ ಸಂಜು, ಚಹಲ್

2024ನೇ ಸಾಲಿನ ಐಪಿಎಲ್ ಟೂರ್ನಿಯ ಮೊದಲಾರ್ಧ ಮುಕ್ತಾಯವಾಗಿದ್ದು, ಹಲವು ಆಟಗಾರರು ಅದ್ಭುತ ಪ್ರದರ್ಶನ ತೋರುವ ಮೂಲಕ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಮ್ಮನ್ನು ಆಯ್ಕೆ ಮಾಡಲು ಸರ್ವರೀತಿಯ ಪ್ರಯತ್ನ ಮಾಡುತ್ತಿದ್ದಾರೆ.

T20 World Cup squad selection Updates KL Rahul Sanju Samson Chahal in focus kvn
Author
First Published Apr 28, 2024, 2:39 PM IST

ನವದೆಹಲಿ(ಏ.28): ಸದ್ಯ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭರ್ಜರಿಯಾಗಿ ಸಾಗುತ್ತಿದೆ. ಇದರ ನಡುವೆ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಪ್ರಕ್ರಿಯೆ ಕೂಡಾ ಜೋರಾಗಿಯೇ ನಡೆಯುತ್ತಿದೆ. ಹೀಗಿರುವಾಗ ಇಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್‌ಕರ್ ಅವರನ್ನು ಅನೌಪಚಾರಿಕವಾಗಿ ಭೇಟಿ ಮಾಡಿದ್ದು, ಚುಟುಕು ಕ್ರಿಕೆಟ್ ವಿಶ್ವಕಪ್‌ಗೆ ಭಾರತ ತಂಡದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

2024ನೇ ಸಾಲಿನ ಐಪಿಎಲ್ ಟೂರ್ನಿಯ ಮೊದಲಾರ್ಧ ಮುಕ್ತಾಯವಾಗಿದ್ದು, ಹಲವು ಆಟಗಾರರು ಅದ್ಭುತ ಪ್ರದರ್ಶನ ತೋರುವ ಮೂಲಕ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಮ್ಮನ್ನು ಆಯ್ಕೆ ಮಾಡಲು ಸರ್ವರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಈ ಪೈಕಿ ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕುರಿತಂತೆ ಚರ್ಚೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆಯಿದ್ದರೆ, ಆ ಸ್ಥಾನಕ್ಕೆ ಶಿವಂ ದುಬೆ ಅಥವಾ ರಿಂಕು ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 

ರೋಹಿತ್-ದ್ರಾವಿಡ್‌ಗೆ ICC ಕಪ್ ಗೆಲ್ಲಲು ಲಾಸ್ಟ್ ಚಾನ್ಸ್..! ಆದ್ರೆ ತಂಡಕ್ಕೆ ಕೊಹ್ಲಿಯದ್ದೇ ಚಿಂತೆ..!

ಇನ್ನು ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ವಿಕೆಟ್ ಕೀಪರ್ ಸ್ಥಾನಕ್ಕೆ 6 ಆಟಗಾರರ ನಡುವೆ ಪೈಪೋಟಿ ಇದೆ. ಈ ಪೈಕಿ ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಎರಡನೇ ವಿಕೆಟ್ ಕೀಪರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್, ಕೆ ಎಲ್ ರಾಹುಲ್, ದಿನೇಶ್ ಕಾರ್ತಿಕ್ ಹಾಗೂ ಇಶಾನ್ ಕಿಶನ್ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿದ್ದು, ಆಯ್ಕೆ ಸಮಿತಿ ಯಾರಿಗೆ ಮಣೆ ಹಾಕಲಿದೆ ಎನ್ನುವ ಕುತೂಹಲ ಜೋರಾಗಿದೆ.

ಸ್ಪಿನ್ ಬೌಲಿಂಗ್ ವಿಭಾಗದಲ್ಲೂ ಸಾಕಷ್ಟು ಪೈಪೋಟಿ ಇದ್ದು, ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಹಲ್ ಇಬ್ಬರು ಸ್ಥಾನ ಪಡೆಯುತ್ತಾರೋ ಅಥವಾ ಕೇವಲ ಒಬ್ಬ ತಜ್ಞ ಸ್ಪಿನ್ನರ್‌ಗೆ ಮಣೆ ಹಾಕುತ್ತಾರೋ ಎನ್ನುವುದು ಸ್ಪಷ್ಟವಾಗಿಲ್ಲ. ಯಾಕೆಂದರೆ ತಂಡದಲ್ಲಿ ರವೀಂದ್ರ ಜಡೇಜಾ ಸ್ಪಿನ್ ಆಲ್ರೌಂಡರ್ ಆಗಿರುವುದರಿಂದ ಆಯ್ಕೆ ಸಮಿತಿ ಚಹಲ್ ಹಾಗೂ ಕುಲ್ದೀಪ್ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

"ಇವರನ್ನು ಖರೀದಿಸದ ಹೊರತು ಆರ್‌ಸಿಬಿ ಕಪ್ ಗೆಲ್ಲಲ್ಲ": ಬೆಂಗಳೂರು ತಂಡದ ಬಗ್ಗೆ ಅಚ್ಚರಿ ಮಾತಾಡಿದ ಭಜ್ಜಿ

ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡವು ಇದಾದ ಬಳಿಕ ಚುಟುಕು ವಿಶ್ವಕಪ್‌ನಲ್ಲಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. 2007ರಲ್ಲಿ ಎಂ ಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಭಾರತ ತಂಡವು 2013ರ ಬಳಿಕ ಐಸಿಸಿ ಟ್ರೋಫಿ ಜಯಿಸಲು ಸಾಧ್ಯವಾಗಿಲ್ಲ. 2013ರಲ್ಲಿ ಎಂ ಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ತಂಡವನ್ನು ಮಣಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿತ್ತು. ಇದಾಗಿ ಒಂದು ದಶಕ ಕಳೆದರೂ ಟೀಂ ಇಂಡಿಯಾಗೆ ಐಸಿಸಿ ಟ್ರೋಫಿ ಮರಿಚಿಕೆಯಾಗಿಯೇ ಉಳಿದಿದೆ. ಹೀಗಾಗಿ ಈ ಬಾರಿ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಶತಾಯಗತಾಯ ಜಯಿಸಲು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸಜ್ಜಾಗಿದೆ.
 

Follow Us:
Download App:
  • android
  • ios