Asianet Suvarna News Asianet Suvarna News

ಟೋಕಿಯೋ ಒಲಿಂಪಿಕ್ಸ್‌ ಸಾಧಕರನ್ನು ಸನ್ಮಾನಿಸಿದ ಕ್ರೀಡಾಸಚಿವ ಅನುರಾಗ್ ಠಾಕೂರ್

* ಟೋಕಿಯೋ ಒಲಿಂಪಿಕ್ಸ್‌ ಸಾಧಕರಿಗೆ ನಗದು ಬಹುಮಾನ ವಿತರಿಸಿದ ಐಒಎ

* ಮುಂಬರುವ ಒಲಿಂಪಿಕ್ಸ್‌ಗೆ ಹೆಚ್ಚಿನ ಆರ್ಥಿಕ ನೆರವು ನೀಡುವುದಾಗಿ ಭರವಸೆ

* ಇದೇ ಮೊದಲ ಬಾರಿಗೆ ಪದಕ ವಿಜೇತರಿಗೆ ಐಒಎ ನಗದು ಬಹುಮಾನ ನೀಡಿತು

Sports Minister Anurag Thakur Felicitate India Tokyo Olympics medalists kvn
Author
New Delhi, First Published Aug 16, 2021, 11:35 AM IST

ನವದೆಹಲಿ(ಆ.16): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತೀಯ ಕ್ರೀಡಾಪಟುಗಳನ್ನು ಶ್ಲಾಘಿಸಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌, 2024 ಹಾಗೂ 2028ರ ಒಲಿಂಪಿಕ್ಸ್‌ಗಳಿಗೆ ಸಿದ್ಧತೆ ನಡೆಸಲು ಹೆಚ್ಚಿನ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಭಾನುವಾರ ಟೋಕಿಯೋ ಗೇಮ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳನ್ನು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಸನ್ಮಾನಿಸಿತು.

ಇದೇ ಮೊದಲ ಬಾರಿಗೆ ಪದಕ ವಿಜೇತರಿಗೆ ಐಒಎ ನಗದು ಬಹುಮಾನ ನೀಡಿತು. ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾಗೆ 75 ಲಕ್ಷ ರುಪಾಯಿ, ಬೆಳ್ಳಿ ಪದಕ ವಿಜೇತರಾದ ಕುಸ್ತಿಪಟು ರವಿ ದಹಿಯಾ ಹಾಗೂ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನುಗೆ ತಲಾ 50 ಲಕ್ಷ ರುಪಾಯಿ, ಕಂಚಿನ ಪದಕ ಗೆದ್ದ ಪಿ.ವಿ.ಸಿಂಧು, ಬಾಕ್ಸರ್‌ ಲವ್ಲೀನಾ ಬೊರ್ಗೊಹೈನ್‌ ಹಾಗೂ ಕುಸ್ತಿಪಟು ಭಜರಂಗ್‌ ಪೂನಿಯಾಗೆ ತಲಾ 25 ಲಕ್ಷ ರುಪಾಯಿ ಬಹುಮಾನ ನೀಡಲಾಯಿತು. ಕಂಚು ಪದಕ ಗೆದ್ದ ಭಾರತ ಹಾಕಿ ತಂಡದ ಪ್ರತಿ ಸದಸ್ಯರಿಗೆ ತಲಾ 10 ಲಕ್ಷ ರುಪಾಯಿ, ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಎಲ್ಲಾ 128 ಕ್ರೀಡಾಪಟುಗಳಿಗೆ ತಲಾ 1 ಲಕ್ಷ ರುಪಾಯಿ, ಬಹುಮಾನ ನೀಡಲಾಯಿತು.

17 ದಿನಗಳ ಕಾಲ ನಡೆದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಹಲವು ಮೊದಲುಗಳಿಗೆ ಸಾಕ್ಷಿಯಾಗಿತ್ತು. ಒಲಿಂಪಿಕ್ಸ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ 7 ಪದಕಗಳನ್ನು ಜಯಿಸಿದ ಸಾಧನೆ ಮಾಡಿತ್ತು. ಈ ಮೊದಲು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ 6 ಪದಕಗಳನ್ನು ಜಯಿಸಿದ್ದೇ ಸಾಧನೆಯಾಗಿತ್ತು. ಲಂಡನ್ ಒಲಿಂಪಿಕ್ಸ್‌ ದಾಖಲೆ ಟೋಕಿಯೋ ಒಲಿಂಪಿಕ್ಸ್‌ ಮೂಲಕ ಅಳಿಸಿ ಹೋಗಿದೆ.

ಇನ್ನು ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸುವ ಮೂಲಕ ವೇಟ್‌ಲಿಫ್ಟಿಂಗ್‌ನಲ್ಲಿ ರಜತ ಪದಕ ಗೆದ್ದ ಮೊದಲ ಭಾರತೀಯ ವೇಟ್‌ಲಿಫ್ಟರ್ ಎನ್ನುವ ದಾಖಲೆ ಬರೆದಿದ್ದರು. ಈ ಮೊದಲು 2000ನೇ ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದೇ ಗರಿಷ್ಠ ಸಾಧನೆ ಎನಿಸಿತ್ತು. ನೀರಜ್ ಚೋಪ್ರಾ, ರವಿಕುಮಾರ್ ದಹಿಯಾ, ಭಜರಂಗ್ ಪೂನಿಯಾ. ಲವ್ಲೀನಾ ಬೊರ್ಗೊಹೈನ್ ತಮ್ಮ ಚೊಚ್ಚಲ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದರು.

ಇನ್ನು ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡವು ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ಸ್‌ ಪದಕ ಜಯಿಸಿದರೆ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಸತತ ಎರಡನೇ ಒಲಿಂಪಿಕ್ಸ್‌ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎನ್ನುವ ದಾಖಲೆ ನಿರ್ಮಿಸಿದ್ದರು. ಈ ಮೊದಲು ಸುಶೀಲ್ ಕುಮಾರ್ ಸತತ 2 ಒಲಿಂಪಿಕ್ಸ್‌ ಪದಕ ಜಯಿಸಿದ್ದರು. ಇನ್ನು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಕೊನೆಯ ದಿನ ನೀರಜ್ ಚೋಪ್ರಾ 87.58 ಮೀಟರ್ ದೂರ ಜಾವಲಿನ್ ಥ್ರೋ ಮಾಡುವ ಮೂಲಕ ಚಿನ್ನದ ಪದಕ ಜಯಿಸಿದರು. ಇದರೊಂದಿಂಗೆ ದೇಶ ಸ್ವತಂತ್ರಗೊಂಡ ಬಳಿಕ ಒಲಿಂಪಿಕ್ಸ್‌ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಿಂದ ಒಲಿಂಪಿಕ್ಸ್‌ ಪದಕ ಗೆದ್ದ ಮೊದಲ ಅಥ್ಲಿಟ್ ಎನ್ನುವ ಗೌರವಕ್ಕೆ ನೀರಜ್ ಭಾಜನರಾಗಿದ್ದರು. 
 

Follow Us:
Download App:
  • android
  • ios