Asianet Suvarna News Asianet Suvarna News

ಹೆಚ್ಚು ಬರ ಪರಿಹಾರಕ್ಕಾಗಿ ಮತ್ತೆ ಸುಪ್ರೀಂ ಕೋರ್ಟಿಗೆ: ಸಚಿವ ಕೃಷ್ಣಬೈರೇಗೌಡ

ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್‌ ಮಾನದಂಡಗಳ ಪ್ರಕಾರ ರಾಜ್ಯಕ್ಕೆ 18,172 ಕೋಟಿ ರು. ಬರ ಪರಿಹಾರ ಬಿಡುಗಡೆ ಮಾಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ 3,498 ಕೋಟಿ ರು. (ಶೇ.20) ಮಾತ್ರ ಬಿಡುಗಡೆ ಮಾಡುವ ಮೂಲಕ ರಾಜ್ಯದ ರೈತರಿಗೆ ಮತ್ತೊಮ್ಮೆ ತೀವ್ರ ಅನ್ಯಾಯ ಮಾಡಿದೆ. 

Again to the Supreme Court for more drought relief Says Minister Krishna Byre Gowda gvd
Author
First Published Apr 28, 2024, 6:23 AM IST

ಬೆಂಗಳೂರು (ಏ.28): ‘ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್‌ ಮಾನದಂಡಗಳ ಪ್ರಕಾರ ರಾಜ್ಯಕ್ಕೆ 18,172 ಕೋಟಿ ರು. ಬರ ಪರಿಹಾರ ಬಿಡುಗಡೆ ಮಾಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ 3,498 ಕೋಟಿ ರು. (ಶೇ.20) ಮಾತ್ರ ಬಿಡುಗಡೆ ಮಾಡುವ ಮೂಲಕ ರಾಜ್ಯದ ರೈತರಿಗೆ ಮತ್ತೊಮ್ಮೆ ತೀವ್ರ ಅನ್ಯಾಯ ಮಾಡಿದೆ. ಇದರ ವಿರುದ್ಧ ಕಾನೂನು ಹೋರಾಟ ಮುಂದುವರೆಸುತ್ತೇವೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ರಾಜ್ಯ ಸರ್ಕಾರವು ಗೋಗರೆದರೂ ಕೇಂದ್ರ ಸರ್ಕಾರ ಬರ ಪರಿಹಾರ ನೀಡಿರಲ್ಲ. ಹೀಗಾಗಿ ಅನಿವಾರ್ಯವಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರಿಂದ ಸುಪ್ರೀಂ ಕೋರ್ಟ್‌ ಸೂಚನೆಯಂತೆ ಹಣ ಬಿಡುಗಡೆ ಮಾಡಿದ್ದಾರೆ. ಈ ಹಣವನ್ನು ಒಂದು ವಾರದೊಳಗಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡುತ್ತೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಹಣ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಶನಿವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಪ್ರಸ್ತುತ 240 ತಾಲೂಕುಗಳ ಪೈಕಿ 223 ತಾಲೂಕುಗಳು ಭೀಕರ ಬರ ಎದುರಿಸುತ್ತಿವೆ. ರೈತರಿಗೆ ಮುಂಗಾರು ಬೆಳೆ ಸಂಪೂರ್ಣ ಕೈಕೊಟ್ಟಿದೆ. ಇನ್ನೂ ಹಿಂಗಾರು ಬೆಳೆಯ ಬಗ್ಗೆಯೂ ನಿರೀಕ್ಷೆ ಇಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯದ ರೈತರ ಬೆನ್ನಿಗೆ ನಿಲ್ಲಬೇಕಾದ ಕೇಂದ್ರ ಸರ್ಕಾರ ನಿಯಮದಂತೆ ನೀಡಬೇಕಾದ ಹಣದ ಶೇ.20 ರಷ್ಟನ್ನು ಮಾತ್ರ ಬಿಡುಗಡೆ ಮಾಡಿದೆ. ತನ್ಮೂಲಕ ರಾಜ್ಯದ ರೈತರ ವಿರುದ್ಧದ ತನ್ನ ಮಲತಾಯಿ ಧೋರಣೆಯನ್ನು ಮುಂದುವರೆಸಿದೆ ಎಂದು ಅಸಮಾಧಾನ ಹೊರಹಾಕಿದರು.

ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್‌ಗೆ ಧನ್ಯವಾದ: ಸಿಎಂ ಸಿದ್ದರಾಮಯ್ಯ

ಹೋರಾಟ ಮುಂದುವರೆಯಲಿದೆ: ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ನಿಯಮದ ಅನ್ವಯವೇ ನಾವು ಮನವಿ ಸಿದ್ದಪಡಿಸಿ ಸಲ್ಲಿಸಿದ್ದೆವು. ಇದರ ಅನ್ವಯ ರಾಜ್ಯಕ್ಕೆ ಕನಿಷ್ಠ 18,172 ಕೋಟಿ ರು. ಬರ ಪರಿಹಾರ ಬಿಡುಗಡೆಯಾಗಬೇಕಿತ್ತು. ಆದರೆ ಕೇಂದ್ರವು ಕರ್ನಾಟಕದ ಹಕ್ಕಿಗೆ ಕಿಂಚಿತ್ತೂ ಬೆಲೆ ನೀಡಿಲ್ಲ. ಹೀಗಾಗಿ ಉಳಿದ ಹಣವನ್ನು ಕೇಂದ್ರ ಬಿಡುಗಡೆ ಮಾಡುವವರೆಗೆ ರಾಜ್ಯದ ಹೋರಾಟ ಮುಂದುವರೆಯಲಿದೆ ಎಂದು ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು.

ಪರಿಹಾರ ನೀಡಿದ್ದು ಕೇಂದ್ರವಲ್ಲ, ಕೋರ್ಟ್!: ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡಿರುವುದು ಸುಪ್ರೀಂ ಕೋರ್ಟ್ ವಿನಃ ಕೇಂದ್ರ ಸರ್ಕಾರವಲ್ಲ. ಕರ್ನಾಟಕಕ್ಕೆ ಬರ ಪರಿಹಾರ ನೀಡುವ ಯಾವುದೇ ಉದ್ದೇಶವೂ ಅವರಿಗೆ ಇದ್ದಂತಿರಲಿಲ್ಲ. ರಾಜ್ಯ ಸರ್ಕಾರ ಬರ ಘೋಷಿಸಿ ಸೆ.22 ರಂದೇ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಿತ್ತು. ಕೇಂದ್ರದಿಂದ ತಂಡ ರಾಜ್ಯಕ್ಕೆ ಆಗಮಿಸಿ ಅ.4 ರಿಂದ 9ರ ವರೆಗೆ 13 ಜಿಲ್ಲೆ ಪ್ರವಾಸ ಮಾಡಿ ಕೇಂದ್ರ ಕೃಷಿ- ಗೃಹ ಸಚಿವಾಲಯಕ್ಕೆ ಒಂದೇ ವಾರದಲ್ಲಿ ವರದಿ ಸಲ್ಲಿಸಿತ್ತು. ನ.13ಕ್ಕೆ ರಾಜ್ಯಕ್ಕೆ ಸಂಬಂಧಿಸಿದ ಎಲ್ಲಾ ಶಿಫಾರಸುಗಳೂ ಗೃಹ ಸಚಿವರ ಕಚೇರಿಗೆ ತಲುಪಿದ್ದು, ನವೆಂಬರ್‌ನಲ್ಲೇ ಪರಿಹಾರ ನೀಡಬೇಕಿದ್ದರೂ ಆರು ತಿಂಗಳು ಕಳೆದರೂ ನೀಡಿರಲಿಲ್ಲ ಎಂದು ಕಿಡಿ ಕಾರಿದರು.

ಹೀಗಾಗಿ ಅನಿವಾರ್ಯವಾಗಿ ವಿಪತ್ತು ನಿರ್ವಹಣಾ ಕಾಯ್ದೆ-2005ರ ಪ್ರಕಾರ ಕಾನೂನಿನಂತೆ ನಮಗೆ ಬರಬೇಕಾದ ಹಣಕ್ಕಾಗಿ ನ್ಯಾಯಾಲಯ ಮೆಟ್ಟಿಲೇರಿ ಕಾನೂನು ಮೊರೆ ಹೋಗಬೇಕಾಯಿತು. ಕೇಂದ್ರ ಸರ್ಕಾರದ ವಕೀಲರು ಕೋರ್ಟ್‌ನಲ್ಲಿ ಕೈ ಮುಗಿದು ನಮಗೆ ಈ ವಾದವೇ ಬೇಡ. ಶೀಘ್ರ ಕರ್ನಾಟಕದ ಬರ ಪರಿಹಾರ ಮನವಿ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಅದರಂತೆ ಸುಪ್ರೀಂ ಕೋರ್ಟ್‌ನಿಂದ ನಮಗೆ ನ್ಯಾಯ ಸಿಕ್ಕಿದೆಯೇ ಹೊರತು ಕೇಂದ್ರ ಸರ್ಕಾರದಿಂದ ಅಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

ಬರ ಪರಿಹಾರ: ಕೇಂದ್ರದ ವಿರುದ್ಧ ಇಂದು ಕಾಂಗ್ರೆಸ್‌ ಪ್ರತಿಭಟನೆ: ಡಿ.ಕೆ.ಶಿವಕುಮಾರ್‌

ಕೇಂದ್ರದಿಂದ ನಿಯಮ ಉಲ್ಲಂಘನೆ: ಕೇಂದ್ರವು ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿರುವ ಬಗ್ಗೆ ಮೊದಲು ರಾಜ್ಯಕ್ಕೆ ಕೇಂದ್ರ ಹಣಕಾಸು ಇಲಾಖೆಯಿಂದ ಪತ್ರ ಬರೆಯಬೇಕಿತ್ತು. ನಿಯಮ ಪಾಲಿಸದೆ ಬರ ಪರಿಹಾರ ಬಿಡುಗಡೆ ಅಧಿಸೂಚನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರಕ್ಕೂ ಸಾಮಾಜಿಕ ಜಾಲತಾಣದಿಂದಲೇ ಗೊತ್ತಾಗಿದೆ. ಸಾಮಾಜಿಕ ಜಾಲತಾಣದಿಂದ ವಿಷಯ ತಿಳಿದ ನಂತರ ನಮ್ಮ ಅಧಿಕಾರಿಗಳು ಕೇಂದ್ರ ಹಣಕಾಸು ಇಲಾಖೆಯ ಜೊತೆ ಮಾತನಾಡಿ ಬರ ಪರಿಹಾರವನ್ನು ಖಚಿತಪಡಿಸಿಕೊಂಡಿದ್ದಾರೆ. ಆಗ ರಾಜ್ಯಕ್ಕೆ ಅಧೀಕೃತ ಪತ್ರ ಬರೆದ ನಂತರ ಈ ಹಣವನ್ನು ರಾಜ್ಯದ ಖಾತೆಗೆ ವರ್ಗಾಯಿಸಲಾಗುವುದು ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ. ಇದು ಸ್ಪಷ್ಟ ನಿಯಮ ಉಲ್ಲಂಘನೆ ಎಂದು ಕೃಷ್ಣ ಬೈರೇಗೌಡ ಆರೋಪಿಸಿದರು.

Follow Us:
Download App:
  • android
  • ios